ರೈತರ ಆತ್ಮಹತ್ಯೆ ಕಾರಣಗಳು : Reasons For Indian Farmer Suicide
Reasons For Indian Farmer Suicide : ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡು, ಅದನ್ನೇ ಅವಲಂಬಿಸಿ ಬದುಕುತ್ತಿರುವ ಎಷ್ಟೋ ಕುಟುಂಬಗಳು ಭಾರತದಲ್ಲಿವೆ. ಆದರೆ ಇಂತಹ ಕೆಲವು ರೈತ ಕುಟುಂಬಗಳು ತಮ್ಮ ಕೃಷಿಯ ಅಗತ್ಯತೆಗಾಗಿ ಮಾಡಿದ ಸಾಲಭಾದೆಯನ್ನು ತಾಳಲಾರದೆ ಅಸಹಾಯಕರಾಗಿ ಸಾವಿನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ. ಕೃಷಿಯನ್ನೇ ಅವಲಂಭಿಸಿರುವ ನಮ್ಮ ದೇಶದ ಬಹುತೇಕ ಗ್ರಾಮೀಣಿಗರಿಗೆ ಕೃಷಿಕಾಯಕ ಹೊರತು ಪಡಿಸಿ ಬೇರಾವ ಕೌಶಲ್ಯಗಳು ಗೊತ್ತಿರುವುದಿಲ್ಲ, ಹೀಗಾಗಿ ಕೃಷಿಯೊಂದೆ ಅವರಿಗೆ ಜೀವಾನಾಧಾರವಾಗಿರುತ್ತದೆ. ಅನಾಧಿಕಾಲದಿಂದಲೂ ನಮ್ಮ ಕೃಷಿಯು ನಿಸರ್ಗದ ವಿದ್ಯಮಾನಗಳೇ ವರ ಹಾಗೂ ಶಾಪವಾಗಿ ಪರಿಣಮಿಸಿವೆ ಎಂದರೆ ತಪ್ಪಾಗುವುದಿಲ್ಲ. ಆಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ವೈಜ್ಞಾನಿಕ ಪದ್ಧತಿಯ ಜ್ಞಾನದ ಕೊರತೆ, ಜೊತೆಗೆ ಬೆಳೆಯನ್ನು ಕಾಡುವ ರೋಗಗಳು, ಹೀಗೆ ಒಂದಲ್ಲ ಒಂದು ಸಂಕಟ ಇದ್ದೇ ಇರುತ್ತದೆ. ಇಂತಹ ಸಂಕಷ್ಟಗಳನ್ನು ದಾಟಿ, ಒಮ್ಮೊಮ್ಮೆ ಉತ್ತಮ ಇಳುವರಿಯೊಂದಿಗೆ ಒಳ್ಳೆ ಬೆಳೆ ಕೈಗೆ ಸಿಕ್ಕಾಗ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿರುತ್ತದೆ. ಇದಕ್ಕೆ ಮುಖ್ಯ ಕಾರಣ, ಬೆಲೆ ಕುಸಿತದ ಪರಿಣಾಮದಿಂದ ಹೊರಬರಲು ಸರಿಯಾದ ವೈಜ್ಞಾನಿಕ ಪದ್ಧತಿಯ ಶೇಖರಣಾ ವ್ಯವಸ್ಥೆಯ ಕೊರತೆ. ಇದರ ಜೊತೆಗೆ ರೈತರ ಕೈ ಹಿಡಿಯಬೇಕಾದ ಆಡಳಿತ ಯಂತ್ರವು, ಕೆಲವೊಮ್ಮೆ ದಲ್ಲಾಳಿಗಳು ಮತ್ತು ವ್ಯಾಪಾರಿಗಳ ಜೊತೆ ಅಕ್ರಮ ಸ್ನೇಹ ಮಾಡುತ್ತದೆ. ಹೀಗೆ ರೈತನ ಸಮಸ್ಯೆಗಳು ಉದ್ದನೆಯ ರೈಲಿನಂತೆ, ಒಂದಕೊಂದು ಅಂಟಿಕೊಂಡ ಬೋಗಿಯಂತೆ ಭಾಸವಾಗುತ್ತದೆ.
- ಜಗತ್ತಿನಲ್ಲೆ 2ನೇ ಅತಿದೊಡ್ಡ ಕೃಷಿ ಉತ್ಪಾದಕ ದೇಶವಾಗಿರುವ ನಮ್ಮ ರಾಷ್ಟ್ರದಲ್ಲಿ ಒಟ್ಟು ಕೃಷಿ ಭೂಮಿಯ ಪೈಕಿ 2/3 ರಷ್ಟು ಪ್ರದೇಶದಲ್ಲಿ ರೈತರು ಮಳೆಯನ್ನೇ ನೆಚ್ಚಿಕೊಂಡು ವ್ಯವಸಾಯ ಮಾಡುತ್ತಾರೆ. ಹಾಗಾಗಿ ರೈತರು ಮಾಡುವ ವ್ಯವಸಾಯವು ಒಂದು ರೀತಿ ಮಳೆಯೊಡನೆ ಆಡುವ ಜೂಜಾಟವಿದ್ದಂತೆ.ಹೆಚ್ಚಿನ ಸಮಯದಲ್ಲಿ, ಸಕಾಲಕ್ಕೆ ಮಳೆ ಬಾರದ ಕಾರಣ ಸರಿಯಾದ ಬೆಳೆ ತೆಗೆಯಲು ಸಾದ್ಯವಾಗುವುದಿಲ್ಲ, ಒಮ್ಮೊಮ್ಮೆ ಅಗತ್ಯಕ್ಕಿಂತಲು ಹೆಚ್ಚು ಮಳೆ ಬರುವ ಕಾರಣ ಹಾಗೂ ಅಕಾಲಿಕ ಮಳೆಯಿಂದಾಗಿ ರೈತರು ದೊಡ್ಡ ಮಟ್ಟದಲ್ಲಿ ನಷ್ಟಕ್ಕೊಳಗಾಗುತ್ತಾರೆ.
2. ಇತ್ತೀಚಿಗೆ ರೈತರು ಸಾಂಪ್ರದಾಯಿಕ ಬೆಳೆಗಳಿಂದ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿಕೊಂಡಿದ್ದರಿಂದ ಹೆಚ್ಚಾದ ಉತ್ಪಾದನಾ ವೆಚ್ಚ, ದುಬಾರಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಖರೀದಿಗಾಗಿ ಬಂಡವಾಳಕ್ಕೆ ಸಾಂಸ್ಥಿಕ ಸಾಲವನ್ನು ಬಿಟ್ಟು ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ಪರಿಪಾಠ ಮತು ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ ಸಾಲ ನೀಡಿದವರು ಮಾಡುವ ಅಪಮಾನಗಳು ರೈತರಿಗೆ ಆತ್ಮಹತ್ಯೆಯ ಮಾರ್ಗಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ.
3.ನೀರಾವರಿ ಬೇಸಾಯ ಪದ್ಧತಿಯಲ್ಲಿ ಕಾಲುವೆ ಮತ್ತು ಕೆರೆ ನೀರಿನ ಬೇಸಾಯ ಹೊರತುಪಡಿಸಿ ಶೇಕಡ 60ರಷ್ಟು ವ್ಯವಸಾಯವು, ಬಾವಿ ಮತ್ತು ಕೊಳವೆ ಬಾವಿ ನೀರನ್ನೇ ಅವಲಂಬಿಸಿದೆ. ಕೆಲವೊಮ್ಮೆ, ಕೊಳವೆ ಬಾವಿ ವೈಫಲ್ಯದಿಂದ ಹೆಚ್ಚಾಗುವ ಸಾಲದ ಹೊರೆ ರೈತರನ್ನು ಸಾವಿನ ಕಡೆಗೆ ಮುಖ ಮಾಡಿಸುತ್ತದೆ…
ಮುಂದುವರಿಯುತ್ತದೆ….
ರೈತರ ಆತ್ಮಹತ್ಯೆಗೆ ಕಾರಣವಾಗುವ ಇನ್ನಷ್ಟು ಪ್ರಮುಖ ಕಾರಣಗಳ ಪಟ್ಟಿ ಇಲ್ಲಿದೆ.
- ನಮ್ಮ ದೇಶದ ಬಹುತೇಕ ರೈತರು ಇನ್ನೂ ಸಹ ಹಳೆಯ ಸಾಂಪ್ರದಾಯಿಕ ಪದ್ದತಿಯಿಂದ ವೈಜ್ಞಾನಿಕ ಪದ್ದತಿಗೆ ಪರಿವರ್ತನೆಯಾಗಿಲ್ಲ. ಸಂಕಷ್ಟದಲ್ಲಿರುವ ಸಣ್ಣ ಇಡುವಳಿದಾರರು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಮತ್ತು ಅವುಗಳ ಬಗ್ಗೆ ಮಾಹಿತಿ ಇಲ್ಲದೇ ಇರುವುದು ಮುಖ್ಯ ಕಾರಣವಾಗಿ, ರೈತರು ಆರ್ಥಿಕವಾಗಿ ಸಬಲರಾಗಲು ಸಾದ್ಯವಾಗುತ್ತಿಲ್ಲ.
- ಇನ್ನೊಂದು ಮುಖ್ಯ ಕಾರಣ ಎಂದರೆ, ವಾಣಿಜ್ಯ ಬೆಳೆಗಳನ್ನು ನಿರಂತರವಾಗಿ ಬೆಳೆಯುವುದರಿಂದ, ಜಮೀನಿನಲ್ಲಿ ಇಳುವರಿ ಕಡಿಮೆಯಾಗಿ ಉಂಟಾಗುವ ನಷ್ಟ, ನಕಲಿ ಬೀಜ, ನಕಲಿ ಗೊಬ್ಬರ ಮತ್ತು ನಕಲಿ ಕ್ರಿಮಿನಾಶಕ ಕಂಪನಿಗಳ ಮೋಸದ ಜಾಲಕ್ಕೆ ಬಿದ್ದು ಉಂಟಾಗುವ ನಷ್ಟವನ್ನು ಭರಿಸಲಾಗದೇ, ರೈತರು ಚೇತರಿಸಿಕೊಳ್ಳಲು ಅಸಾಧ್ಯವಾಗುವುದು.
- ಹೆಚ್ಚಿನ ಸಂದರ್ಭದಲ್ಲಿ, ರೈತರ ಆದಾಯ ಕಡಿಮೆ, ಖರ್ಚು ಜಾಸ್ತಿ, ನಿಧಾನ ಗತಿಯ ಯೋಜನೆಗಳು ಮತ್ತು ನೀತಿಗಳು, ಹಾಗೂ ವರ್ಷಪೂರ್ತಿ ಸಾಲಾಗಿ ಬರುವ ಹಬ್ಬಹರಿದಿನಗಳು ರೈತರ ಸಾಲವನ್ನು ಹೆಚ್ಚಿಸುತ್ತದೆ.
ಇನ್ನು, ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಪ್ರಕಾರ ಇಲ್ಲಿಯವರೆಗೂ 2005 ನೇ ಇಸವಿಯಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆಯ ಮಾರ್ಗವನ್ನು ಹಿಡಿದ್ದಾರೆ. ಒಟ್ಟು 2474 ಜನ ರೈತರು ಸಾಲ ಮರುಪಾವತಿ ಮಾಡಲಾಗದೆ ಬ್ಯಾಂಕ್ ಅಧಿಕಾರಿಗಳ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೇಲಿನ ಎಲ್ಲಾ ಅಂಶಗಳು ಕಾರಣಗಳಾಗಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ರಾಜ್ಯದಲ್ಲಿ ದಿನನಿತ್ಯದ ವರದಿಯಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಲು ಹಾಗೂ ಪರಿಹರಿಸುವ ನಿಟ್ಟಿನಲ್ಲಿ ಯೋಚಿಸುವುದು ಅತ್ಯಗತ್ಯವಾಗಿದೆ.
ಈಗಾಗಲೇ ಹೇಳಿದಂತೆ, ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಗೆ ಸಾಕಷ್ಟು ಕಾರಣಗಳಿವೆ. ಬರ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಪ್ರಮುಖ ಕಾರಣವಾದರೆ, ಬಂಡವಾಳೀಕರಣ ಮತ್ತು ಖಾಸಗೀಕರಣವು ಇತರ ಅಂಶಗಳಾಗಿವೆ. ಇದಲ್ಲದೆ, ಹೆಚ್ಚಿನ ಸಾಲಗಳು ಮತ್ತು ಕುಟುಂಬದ ಒತ್ತಡವೂ ಈ ಸಮಸ್ಯೆಗೆ ಕೊಡುಗೆ ನೀಡುತ್ತದೆ.
ಇನ್ನು, ರೈತರ ಆತ್ಮಹತ್ಯೆಗಳನ್ನು ನಾವು ಹೇಗೆ ತಡೆಯಬಹುದು ಎಂದು ಯೋಚಿಸುವುದಾದರೆ, ಸಾಮೂಹಿಕ ಪ್ರಯತ್ನದಿಂದ ರೈತರ ಆತ್ಮಹತ್ಯೆ ತಡೆಯಬಹುದು. ಸರಕಾರ ರೈತರಿಗೆ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಬೇಕು. ಇದಲ್ಲದೆ, ಅವರಿಗೆ ಸರಿಯಾದ ನೀರಾವರಿ ಸೌಲಭ್ಯಗಳನ್ನು ಒದಗಿಸಬೇಕು. ಹಾಗೇ, ರೈತರ ನಷ್ಟವನ್ನು ಸರಿದೂಗಿಸಲು ನಿಜವಾದ ಬೆಳೆ ವಿಮಾ ಪಾಲಿಸಿಗಳನ್ನು ಪ್ರಾರಂಭಿಸಬೇಕು.
ಆತ್ಮಹತ್ಯೆ ಸಮಸ್ಯೆಯನ್ನು ನಿವಾರಿಸಲು ಇರುವ ಮಾರ್ಗಗಳ ಬಗ್ಗೆ, ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
ಇದನ್ನು ಓದಿ...ಕೃಷಿಯ ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನಗಳು : Modern technologies for development of agriculture
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ