ರೈತ ಬಾಂಧವರಿಗೆ ಸಿಹಿಸುದ್ದಿ: ಸರ್ಕಾರದಿಂದ ನಿಮಗೆ ಸಿಗಲಿದೆ ಐದು ಲಕ್ಷ ರೂ. ಡ್ರೋನ್ ಸಬ್ಸಿಡಿ!
ಡ್ರೋನ್ ಸಬ್ಸಿಡಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ರೈತ ಬಾಂಧವರ ಅನುಕೂಲಕ್ಕಾಗಿ ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿವೆ. ಇಂತಹ ಅನೇಕ ಯೋಜನೆಗಳ ಲಾಭವನ್ನು ಈಗಾಗಲೇ ಬಹಳಷ್ಟು ರೈತರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಾವಯವ ಕೃಷಿ ಯೋಜನೆ, ಕೃಷಿ ಭಾಗ್ಯ, ಸಣ್ಣ ಹಾಗೂ ಹನಿ ನೀರಾವರಿ, ಬೆಳೆ ವಿಮೆ, ಕೃಷಿ ಹೊಂಡ ಹೀಗೆ ನಾನಾ ಯೋಜನೆಗಳನ್ನು ನಮ್ಮ ರೈತರಿಗೆಂದೇ ಸರ್ಕಾರಗಳು ರೂಪಿಸಿವೆ. ಈ ಎಲ್ಲಾ ಯೋಜನೆಗಳು ರೈತರ ಕೃಷಿ ಚಟುವಟಿಕೆಯಲ್ಲಿನ ಕಷ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಸಿಗುವ ವಿಚಾರದಲ್ಲಿ, ಮಳೆ ಹಾಗೂ ಹವಾಮಾನದಲ್ಲಾಗುವ ವೈಪರೀತ್ಯದಿಂದ ಬೆಳೆ ನಷ್ಟವಾದಾಗ ದೊರಕುವ ಪರಿಹಾರದ ವಿಚಾರದಲ್ಲಿ ಅನಿಶ್ಚಿತತೆ ಹೊರತುಪಡಿಸಿದರೆ ರೈತ ತನ್ನ ನೆಲದ ಕಾರ್ಯದಲ್ಲಿ ನೆಮ್ಮದಿಯಿಂದ ತೊಡಗಿಸಿಕೊಳ್ಳೋಕೆ ಯಾವುದೇ ಅಡ್ಡಿಯಿಲ್ಲ.
ಇದೀಗ, ರೈತರಿಗೆ ಸರ್ಕಾರ ಮತ್ತೊಂದು ಕೊಡುಗೆ ನೀಡಿದ್ದು, ಕೃಷಿ ಚಟುವಟಿಕೆಯಲ್ಲಿ ಡ್ರೋನ್ ಬಳಕೆಗೆ ಉತ್ತೇಜನ ನೀಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರೀ ಸಬ್ಸಿಡಿ ನೀಡುವ ಯೋಜನೆಯನ್ನು ಹೊರತಂದಿದ್ದು, ಕೃಷಿ ಚಟುವಟಿಕೆಯಲ್ಲಿ ಬಳಸುವ ಸಲುವಾಗಿ ಡ್ರೋನ್ ಕೊಳ್ಳುವ ರೈತರಿಗೆ ಸರ್ಕಾರ ಭಾರೀ ಸಬ್ಸಿಡಿ ನೀಡಲು ನಿರ್ಧರಿಸಿದೆ. ಡ್ರೋನ್ ಬೆಲೆಯ 50% ವರೆಗಿನ ಹಣ ಅಥವಾ ಗರಿಷ್ಠ ಐದು ಲಕ್ಷ ರೂಪಾಯಿವರೆಗಿನ ಹಣವನ್ನು ಸರ್ಕಾರ ಸಬ್ಸಿಡಿಯಾಗಿ ಒದಗಿಸಲು ನಿರ್ಧರಿಸಿದೆ.
ಡ್ರೋನ್ ಎಂದರೆ ಒಂದು ರೀತಿಯಲ್ಲಿ ಮಿನಿ ಕಾಪ್ಟರ್ ಇದ್ದಂತೆ. ರಿಮೋಟ್ ಕಂಟ್ರೋಲ್ ಬಳಸುವ ಮೂಲಕ ಡ್ರೋನ್‌ಗಳನ್ನು ಹಾರಾಡಿಸಬಹುದು. ಈ ಮೊದಲು, ಮಿಲಿಟರಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಡ್ರೋನ್ ನ್ನು ಸಾಮಾನ್ಯವಾಗಿ ಬಳಸಲಾಗುತ್ತಿತ್ತು. ಇದೀಗ ಕೃಷಿ ಕ್ಷೇತ್ರದಲ್ಲೂ ಇದರ ಉಪಯುಕ್ತತೆ ಹೆಚ್ಚಿರುವುದು ರುಜುವಾತಾಗಿರುವ ಕಾರಣ, ಕೃಷಿ ಭೂಮಿಯಲ್ಲಿ ಡ್ರೋನ್ ನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು. ಕೃಷಿ ಬೆಳೆಗೆ ಔಷಧಿ, ರಾಸಾಯನಿಕ ಇತ್ಯಾದಿಗಳನ್ನು ಹಾಕಲು ಡ್ರೋನ್‌ಗಳನ್ನು ಬಳಸಬಹುದು. ಈ ಕಾರ್ಯಗಳಿಗೆ ಡ್ರೋನ್ ಬಳಸುವ ಮೂಲಕ, ಬಹಳಷ್ಟು ಮಾನವ ಸಂಪನ್ಮೂಲದ ಉಳಿಕೆ ಸಾಧ್ಯವಾಗುತ್ತದೆ. ಇಷ್ಟೇ ಅಲ್ಲದೇ, ಬೆಳೆ ಹಾನಿ ಪರಿಶೀಲನೆಗೆ, ದೊಡ್ಡ ಪ್ರಮಾಣದ ಪಶುಗಳ ನಿರ್ವಹಣೆಗೂ ಇದು ಸಹಕಾರಿಯಾಗಿದೆ. ಕೃಷಿ ಇಲಾಖೆಯೂ ಕೂಡ, ಕೃಷಿ ಜಮೀನಿನ ಮಣ್ಣಿನ ಪರಿಶೀಲನೆ ಹಾಗೂ ಬೆಳೆ ಅಂದಾಜು ಇತ್ಯಾದಿ ಕಾರ್ಯಗಳಿಗಾಗಿಯೂ ಬಳಸಬಹುದು.
ಇನ್ನು, ಕೃಷಿ ಕೆಲಸಕ್ಕಾಗಿ ಬಳಸಲ್ಪಡುವ ಒಂದು ಡ್ರೋನ್‌ನ ಬೆಲೆ ಅಂದಾಜು 10 ಲಕ್ಷ ರೂಪಾಯಿಯಾಗಿದ್ದು, ಡ್ರೋನ್ ಸಬ್ಸಿಡಿ ಯೋಜನೆಯಲ್ಲಿ ಪ್ರತೀ ರೈತರಿಗೂ 5 ಲಕ್ಷ ರೂಪಾಯಿ ಅಥವಾ 50% ಸಬ್ಸಿಡಿ ದೊರಕುತ್ತದೆ ಎಂದಲ್ಲ. ಸಣ್ಣ ಹಾಗೂ ಅತಿಸಣ್ಣ ರೈತರು, ಮಹಿಳಾ ಕೃಷಿಕರು ಹಾಗೂ ಈಶಾನ್ಯ ರಾಜ್ಯದ ರೈತರಿಗೆ ಹೆಚ್ಚಿನ ಸಬ್ಸಿಡಿ ಒದಗಿಸಲಾಗುತ್ತಿದೆ. ಈ ವರ್ಗಕ್ಕೆ ಸೇರುವ ರೈತರು ಡ್ರೋನ್ ಖರೀದಿಸಿದಾಗ, ಅವರಿಗೆ ಗರಿಷ್ಠ 5 ಲಕ್ಷ ರೂ. ವರೆಗೂ ಸಬ್ಸಿಡಿ ನೀಡಲಾಗುತ್ತದೆ. ಅಥವಾ ಡ್ರೋನ್ ಬೆಲೆಯ ಅರ್ಧದಷ್ಟನ್ನು ಸರ್ಕಾರ ಸಬ್ಸಿಡಿಯಾಗಿ ನೀಡುತ್ತದೆ. ಈಗ ನಾವು ತಿಳಿಸಿದ ಯಾವುದೇ ವರ್ಗಕ್ಕೆ ಸೇರದ ಇತರ ರೈತರಿಗೆ, 5 ಲಕ್ಷ ರೂಪಾಯಿಯ ಬದಲು 4 ಲಕ್ಷ ರೂ. ವರೆಗೂ ಸಬ್ಸಿಡಿ ನೀಡಲಾಗುತ್ತದೆ. ಅಥವಾ ಡ್ರೋನ್ ನ ಬೆಲೆಯ 40% ದಷ್ಟು ಮೊತ್ತವನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ.
Crop insurance: ಕರ್ನಾಟಕದ ರೈತರ ಖಾತೆಗಳಿಗೆ 4.32 ಕೋಟಿ ರೂ. ಬೆಳೆ ವಿಮೆ ಬಿಡುಗಡೆ.
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ