Dragon Farming- ಡ್ರ್ಯಾಗನ್ ಕೃಷಿಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರನ ಯಶೋಗಾಥೆ
ಎಂಬಿಎ ಪದವಿ ಪಡೆದು ಖಾಸಗಿ ಕಂಪನಿ ಫ್ಲಿಪ್ ಕಾರ್ಟ್ ಬೆಂಗಳೂರು ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಎನ್ನುವ ಯುವಕನೊಬ್ಬ ಯೂಟ್ಯೂಬ್ ಮುಖಾಂತರ ಡ್ರ್ಯಾಗನ್ ಪ್ರೂಟ್ (Dragon Fruit) ಬೇಸಾಯದ ಕುರಿತು ತಿಳಿದುಕೊಂಡರು. ಡ್ರ್ಯಾಗನ್ ಪ್ರೂಟ್ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದಾಗ ಅವರಿಗೆ ಅನೇಕ ಆಶ್ಚರ್ಯಕರ ವಿಷಯಗಳು ತಿಳಿದುಬಂದವು.
ಈ ಹಣ್ಣು ಅನೇಕ ಆರೋಗ್ಯಕರ ಅಂಶಗಳನ್ನು ಒಳಗೊಂಡಿದ್ದು, ಬಿಳಿ ರಕ್ತ ಕಣ ಹೆಚ್ಚಿಸುವಲ್ಲಿ ಇದರ ಪಾತ್ರ ಹಿರಿದಾಗಿದೆ. ಡೆಂಗ್ಯೂ ಜ್ವರಕ್ಕೆ ರಾಮಬಾಣವಾಗಿರುವ ಡ್ರ್ಯಾಗನ್ ಪ್ರೂಟ್, ಅಜೀರ್ಣಕ್ಕೆ ಉತ್ತಮ ಮದ್ದಾಗಿಯೂ ಕೆಲಸ ಮಾಡುತ್ತದೆ. ಮಧುಮೇಹ ನಿಯಂತ್ರಣಕ್ಕೂ ಡ್ರ್ಯಾಗನ್ ಫ್ರೂಟ್ ಪರಿಣಾಮಕಾರಿಯಾಗಿದ್ದು, ಶ್ವಾಸಕೋಶದ ಸಮಸ್ಯೆ, ಉಸಿರಾಟದ ತೊಂದರೆ ಪರಿಹಾರಕ್ಕೂ ಸಹಕಾರಿಯಾಗಿದೆ. ನಿಯಮಿತವಾಗಿ ಡ್ರ್ಯಾಗನ್ ಪ್ರೂಟ್ ಸೇವನೆಯಿಂದ ಚರ್ಮದ ಕಾಂತಿಯೂ ವೃದ್ದಿಯಾಗುತ್ತದೆ.
ಡ್ರ್ಯಾಗನ್ ಹಣ್ಣಿನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂದರಿತ ಶ್ರೀನಿವಾಸ್, ತಮ್ಮ ಹಳ್ಳಿಗೆ ವಾಪಸ್ಸಾಗಿ ತನ್ನ ತಂದೆ ಅನಂತರಾವ ಇತ್ತಾಪ್ಪೆಯವರ ಕೃಷಿ ದುಡಿಮೆಗೆ ನೆರವಾದರು. ಐದಾರು ಎಕರೆಯಲ್ಲಿ ಸಾಂಪ್ರದಾಯಿಕ ಕೃಷಿ ಮಾಡಿಕೊಂಡಿದ್ದ ಅನಂತರಾವ ಇತ್ತಾಪ್ಪೆ, ಇದೀಗ ತಮ್ಮ ಜಮೀನಿನಲ್ಲಿ ಮಗನ ಜೊತೆ ಸೇರಿ ಡ್ರ್ಯಾಗನ್ ಹಣ್ಣು ಬೆಳೆಯುವ ಮೂಲಕ, ಸುತ್ತಮುತ್ತಲಿನ ರೈತರಿಗೂ ಮಾದರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೂ, ತಮ್ಮ ಐದಾರು ಎಕರೆಯ ಕೃಷಿ ಜಮೀನಿನಲ್ಲಿ ಯಾವುದೇ ಲಾಭ ಬರುತ್ತಿರಲಿಲ್ಲ ಎಂಬ ಬಗ್ಗೆ ಚಿಂತಿಸುತ್ತಿದ್ದ ಶ್ರೀನಿವಾಸ್, ಯೂಟ್ಯೂಬ್ ಚಾನಲ್ ಮುಖಾಂತರ ಪರಿಚಿತರಾಗಿದ್ದ ಹಾಗೂ ಡ್ರ್ಯಾಗನ್ ಕೃಷಿಯಲ್ಲಿ ಯಶಸ್ಸು ಕಂಡಿದ್ದ ತೆಲಂಗಾಣ ಮೂಲದ ಡಾ. ಶ್ರೀನಿವಾಸನ್ ಅವರ ಮಾರ್ಗದರ್ಶನ ಪಡೆದುಕೊಂಡರು.
ಸುಮಾರು, ಒಂದು ವರ್ಷದ ಹಿಂದೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೋರಂಬಿ ಎನ್ನುವ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಡ್ರ್ಯಾಗನ್ ಹಣ್ಣಿನ ಸಸಿಗಳನ್ನು ನಾಟಿ ಮಾಡಿದರು. ಇವರು ಶ್ರಮವಹಿಸಿ ಮಾಡಿದ ಈ ಕಾಯಕ ಈದೀಗ ಇವರ ಕೈ ಹಿಡಿದಿದ್ದು, ಈ ರೈತ ಕುಟುಂಬವು ಈಗ ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಇತರರಿಗೆ ಮಾದರಿಯಾಗಿ ನಿಂತಿದೆ. ಏಕೆಂದರೆ, ಬೀದರ್, ರಾಯಚೂರು ಹಾಗೂ ಕಲಬುರಗಿ ಜಿಲ್ಲೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದೇ ಈ ಪ್ರದೇಶದಲ್ಲಿರುವ ಬರ ಮತ್ತು ನೀರಿನ ತೊಂದರೆ. ಇಂತಹ ಬರಪೀಡಿತ ಭಾಲ್ಕಿ ತಾಲೂಕಿನ ಮೋರಂಬಿಯಲ್ಲಿ ಡ್ರ್ಯಾಗನ್ ಹಣ್ಣುಗಳನ್ನು ಬೆಳೆದು, ರೈತರಿಗೆ ಮಾದರಿಯಾಗಿ ನಿಂತಿದ್ದಾರೆ ಎಂಬಿಎ ಪದವೀಧರ ಶ್ರೀನಿವಾಸ್.
ಇವರು ಆರಂಭದಲ್ಲಿ, ಒಂದು ಡ್ರ್ಯಾಗನ್ ಹಣ್ಣಿನ ಸಸಿಗೆ ತಲಾ 80 ರೂ. ನಂತೆ, ತೆಲಂಗಾಣ ರಾಜ್ಯದ ಸಂಗಾರೆಡ್ಡಿಯಿಂದ ಒಟ್ಟು 500 ಸಸಿಗಳನ್ನು ತಂದರು. ಜೊತೆಗೆ ಒಂದು ಕಂಬಕ್ಕೆ 450 ರೂ. ನೀಡಿ ಒಟ್ಟು 500 ಪೋಲ್ಗಳನ್ನು ನೆಟ್ಟು ಡ್ರ್ಯಾಗನ್ ಹಣ್ಣಿನ ಸಸಿಗಳನ್ನು ನಾಟಿ ಮಾಡಿದರು.
ತಮ್ಮ ಯಶಸ್ಸಿನ ಬಗ್ಗೆ ಮಾತನಾಡುವ ಶ್ರೀನಿವಾಸ್ ಅನಂತರಾವ ಇತ್ತಾಪ್ಪೆ, “ನಾನು ಬೆಳದಿರುವ ಡ್ರ್ಯಾಗನ್ ಹಣ್ಣಿನ ಸಸಿ ತಳಿಯು ಹೈಬ್ರಿಡ್ SIUM – ಸಿ ಕೆಂಪು ಬಣ್ಣದ ತಳಿಯಾಗಿದ್ದು, ಡ್ರ್ಯಾಗನ್ ಪ್ರೂಟ್ ಪ್ರತಿ ಕೆಜಿಗೆ 90ರಿಂದ 100 ರೂ. ವರೆಗೆ ಮಾರಾಟವಾಗುತ್ತದೆ. ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿದಂತೆ ಸ್ಥಳೀಯವಾಗಿ ಹಣ್ಣುಗಳನ್ನು ಮಾರಾಟ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ರೈತ ಬಾಂಧವರಿಗೆ ಸಿಹಿಸುದ್ದಿ: ಸರ್ಕಾರದಿಂದ ನಿಮಗೆ ಸಿಗಲಿದೆ ಐದು ಲಕ್ಷ ರೂ. ಡ್ರೋನ್ ಸಬ್ಸಿಡಿ
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ